ಮನಸ್ಸಿನಲ್ಲಿ ಮೂಡಿದ ಅನುಭವಗಳನ್ನು ನನ್ನ ಬ್ಲಾಗ್ ನಲ್ಲಿ ಹಂಚಿಕೊಂಡಿದ್ದೇನೆ. ಓದಿ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.
ರಮೇಶ ಎಂ.ಎಚ್.
ನಿರಾತಂಕ
ಇತ್ತೀಚೆಗೆ ಪ್ರೊ. ವೆಂಕಟ್ ಪುಲ್ಲಾ ಭಾರತದಲ್ಲಿ ಸಮಾಜಕಾರ್ಯ ವಿಷಯದಲ್ಲಿ ಡಾಕ್ಟರೇಟ್ ಪಡೆದರು. ಆಸ್ಟ್ರೇಲಿಯಾದಲ್ಲಿ ಹಲವು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಅವರು ಹಲವು ವರ್ಷಗಳ ಹಿಂದೆ (ಸುಮಾರು 90ರ ದಶಕದಲ್ಲಿ) TISS (Tata Institute of Social Science) ನಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಒಬ್ಬ ಅರ್ಹ ವಿದ್ಯಾರ್ಥಿಗೆ 500/- ಗಳ ಸಹಾಯವನ್ನು ನೀಡಿದ್ದರಂತೆ. ಪ್ರೊ. ವೆಂಕಟ್ ಪುಲ್ಲಾ ರವರಿಗೂ ಬರುತ್ತಿದ್ದ ಸಂಬಳ ಐದಾರು ಸಾವಿರವಿದ್ದಿರಬಹುದು. ಆ 500/- ರೂ.ಗಳು ಸಹಾಯ ಪಡೆದ ವಿದ್ಯಾರ್ಥಿ ಮುಂದೊಂದು ದಿನ ಅಂತರರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಪಡೆದ ನಂತರ ಪ್ರೊ. ವೆಂಕಟ್ ಪುಲ್ಲಾ ರವರಿಗೆ ತಾನು ಪಡೆದ ಸಹಾಯಧನವನ್ನು ಹಿಂತಿರುಗಿಸಲು ಭೇಟಿಯಾದರು. ಆಗ ಪ್ರೊ. ವೆಂಕಟ್ ಪುಲ್ಲಾ ರವರು ನಾನು ನಿನಗೆ ಸಹಾಯ ಮಾಡಿದಂತೆ ನೀನು ಒಬ್ಬ ಅರ್ಹ ವಿದ್ಯಾರ್ಥಿಯನ್ನು ಹುಡುಕಿ ಅವನಿಗೆ ನಿನ್ನ ಕೈಲಾದ ಮಟ್ಟಿಗೆ ಸಹಾಯ ಮಾಡು ಎಂದು ಸಲಹೆ ಇತ್ತರಂತೆ. ಈ ರೀತಿಯಾಗಿ ಸಹಾಯ ಪಡೆದವರು ಇಂದು ವಿಶ್ವದಾದ್ಯಂತ ಸುಮಾರು 400ಕ್ಕೂ ಹೆಚ್ಚು ಮಂದಿ ಇದ್ದಾರಂತೆ. ಪ್ರೊ. ವೆಂಕಟ್ ಪುಲ್ಲಾ ರವರಿಂದ ಮೊದಲು ಸಹಾಯ ಪಡೆದ ವ್ಯಕ್ತಿ ತಾನು ಸಹಾಯ ನೀಡಿದ ವ್ಯಕ್ತಿಯೊಂದಿಗೆ ಮಾತನಾಡಿ ಅದೇ ರೀತಿ ಒಬ್ಬರಿಂದ ಒಬ್ಬರು ಮಾತನಾಡಿಕೊಂಡು ಎಲ್ಲರೂ ಇತ್ತೀಚಿಗೊಮ್ಮೆ ಪ್ರೊ. ವೆಂಕಟ್ ಪುಲ್ಲಾ ರವರನ್ನು ಆಹ್ವಾನಿಸಿದರಂತೆ. ಆಗ ಪ್ರೊ. ವೆಂಕಟ್ ಪುಲ್ಲಾ ರವರಿಗೆ ತಾನು ಸಹಾಯ ನೀಡಿದ ತನ್ನ ಶಿಷ್ಯ ಮಾತ್ರ ಗೊತ್ತಿತ್ತು. ಅದೇ ರೀತಿ ಅಲ್ಲಿದ್ದ ಎಲ್ಲರಿಗೂ ಅವರವರು ಸಹಾಯ ನೀಡಿದ ವ್ಯಕ್ತಿಗಳು ಮಾತ್ರ ಗೊತ್ತಿತ್ತು. ಆದರೆ ಅಲ್ಲಿ ಒಟ್ಟಿಗೆ ಸೇರಿದ್ದು 300 ಕ್ಕೂ ಹೆಚ್ಚು ಜನರು ಇದ್ದರು. ಪ್ರೊ. ವೆಂಕಟ್ ಪುಲ್ಲಾ ರವರು ಅವರೆಲ್ಲರನ್ನೂ ಉದ್ದೇಶಿಸಿ ಮಾತನಾಡಿದರಂತೆ. ಒಂದು ಪುಟ್ಟ ಸಹಾಯ ಯಾವ ರೀತಿ ಇತರರ ಬದುಕನ್ನು ಬದಲಾಯಿಸಬಲ್ಲದು ಎಂಬುದು ಇದಕ್ಕೆ ನಿದರ್ಶನವಾಗಿದೆ. ಹಾಗಾಗಿ ಅಗತ್ಯವಿರುವವರಿಗೆ ಸಹಾಯ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಬೇಕು. ಒಂದು ಪುಟ್ಟ ಸಹಾಯದಿಂದ ಸುಮಾರು 400 ಕ್ಕೂ ಹೆಚ್ಚು ಜನರು ಪ್ರೊ. ವೆಂಕಟ್ ಪುಲ್ಲಾ ರವರ ವ್ಯಕ್ತಿತ್ವಕ್ಕೆ ಮಾರುಹೋದರು. ಹಾಗೆಯೇ ಇಂದು ಪ್ರೊ. ವೆಂಕಟ್ ಪುಲ್ಲಾ ರವರು ಸಮಾಜಕಾರ್ಯ ವಿಶ್ವವಿದ್ಯಾಲಯ ಮಾಡಬೇಕೆಂದು ಹೊರಟರೆ ಇಂತಹ ಮಹತ್ವದ ಕೆಲಸಕ್ಕೆ 400 ಜನರು ಪ್ರೊ. ವೆಂಕಟ್ ಪುಲ್ಲಾ ರವರ ಬೆಂಬಲಕ್ಕೆ ನಿಲ್ಲುವುದರಲ್ಲಿ ಆಶ್ಚರ್ಯವೇನಿಲ್ಲವಲ್ಲ.
ರಮೇಶ ಎಂ.ಎಚ್. ನಿರಾತಂಕ www.mhrspl.com www.nirutapublications.org
0 Comments
ಅನಿವಾರ್ಯವಾಗಿ ನಮ್ಮ ರಾಜಕೀಯದ (ಎಲ್ಲಾ ಪಕ್ಷಗಳಿಗೂ ಅನ್ವಯ) ದೊಂಬರಾಟಗಳನ್ನು ನಾವು ಗಮನಿಸುವುದಾದರೆ ನಾವು ಮೂರ್ಖರ ಆಳ್ವಿಕೆಯಲ್ಲಿ ಬದುಕುತ್ತಿರುವ ಬುದ್ಧಿಜೀವಿಗಳಲ್ಲದಿದ್ದರೂ ಸಾಮಾನ್ಯರಾಗಿದ್ದೇವೆ. ಜನಸಾಮಾನ್ಯರು ಮೌನವಾಗಿ ಕಾಸು ಪಡೆದು, ಮತ ಚಲಾಯಿಸಿದ್ದರ ಪರಿಣಾಮ ಇಂದು ಸರಿಯಾದ ಆರೋಗ್ಯಕರ ಸಮಾಜ, ಆಸ್ಪತ್ರೆಗಳು ನಮಗೆ ಇಲ್ಲವಾಗಿವೆ. ಬರಿ ನಮ್ಮ ಮನೆ, ನಾನು ಸರಿಯಾಗಿ ಕಾಸು ಕೂಡಿಟ್ಟುಕೊಂಡರೆ ಸಾಕು ಎಂದು ಬದುಕಿದ್ದರ ಪ್ರತಿಫಲ ಇಂದು ಕಾಸು ಕೆಲಸಕ್ಕೆ ಬಾರದ ಸಂಗತಿಯಾಗಿದೆ. ಸಣ್ಣ ಸಣ್ಣ ವಿಷಯಗಳಲ್ಲೂ ನಾವು ಅಪ್ರಾಮಾಣಿಕರಾಗಿ ಬದುಕಿದ್ದರ ಫಲ ಪ್ರಕೃತಿ ಇಂದು ಪಾಠ ಕಲಿಸಲು ಮುಂದಾಗಿದೆ. ಪಾಠ ಕಲಿತು ಪ್ರಾಮಾಣಿಕವಾಗಿ ಬದುಕದಿದ್ದರೆ ಮನುಜ ಕುಲದ ವಿನಾಶ ಖಂಡಿತ. ಇತರೆ ಜೀವಿಗಳನ್ನು ಹೊರತುಪಡಿಸಿ ಮನುಜ ಕುಲಕ್ಕೆ ಮಾತ್ರ ಕೊರೋನ ಅಂದರೆ ಮನುಷ್ಯ ಜೀವಿಯಷ್ಟು ಪ್ರಕೃತಿಯಲ್ಲಿ ಇನ್ನೊಂದು ಅಪ್ರಾಮಾಣಿಕ ಜೀವಿಯನ್ನು ನಾವೂ ಕಾಣಲಾರೆವು...
#ನಿರಾತಂಕಕವನ ನಾನು ಓದಿದ್ದು ನ್ಯಾಷನಲ್ ಕಾಲೇಜ್ ಬಸವನಗುಡಿಯಲ್ಲಿ. ನಮಗೆ ದಿನನಿತ್ಯ ಎಚ್. ನರಸಿಂಹಯ್ಯ ರವರ ದರ್ಶನವಾಗುತ್ತಿತ್ತು. ಎಚ್.ಎನ್. ಹಾಲ್ ನಲ್ಲಿ ದೊಡ್ಡದಾಗಿ ಅವರ ಒಂದು ವಾಕ್ಯ ಬರೆಸಿದ್ದಾರೆ. "ಪ್ರಶ್ನಿಸದೆ ಒಪ್ಪಿಕೊಳ್ಳಬೇಡಿ ಎಂದು" ಆದರೆ ಕೆಲವೊಮ್ಮೆ ಪ್ರಶ್ನೆಗಳಿಗೆ ಉತ್ತರ ದೊರಕುವುದಿಲ್ಲ ಎಂಬ ಸತ್ಯದ ಅರಿವಾಗುತ್ತಿದೆ.
ಆದರೆ ಪ್ರಶ್ನಿಸುವುದನ್ನು ನಿಲ್ಲಿಸಬಾರದು. ಯಾರಿಗೋ ಹೆದರಿ ಮನಸ್ಸಿನ ಭಾವನೆ ಹೊರಗೆ ಹಾಕದಿದ್ದರೆ ಹೇಡಿ ಅನಿಸುತ್ತದೆ. ನಮ್ಮ ನಮ್ಮ ಅನುಕೂಲಗಳಿಗೆ ತಕ್ಕಂತೆ ಬದುಕುವುದು ಕಲಿತರೆ ಸಮಾಜ ಹಾಳಾಗುತ್ತದೆ. ಹಾಳಾದ ಸಮಾಜದಲ್ಲಿ ನಮ್ಮ ಮುಂದಿನ ಜನಾಂಗ ಹಾಗೂ ನಮ್ಮದೇ ಮಕ್ಕಳು ಬದುಕಬೇಕಾಗುತ್ತದೆ. ಸತ್ಯಶೋಧನೆಯ ಹುಡುಕಾಟದ ಪ್ರಯಾಣದಲ್ಲಿ ಹೆದರುವ ಅವಶ್ಯಕತೆ ಇಲ್ಲ. ರಮೇಶ ಎಂ.ಎಚ್. ನಿರಾತಂಕ ಅವನು ನನ್ನ ಆತ್ಮೀಯ ಗೆಳೆಯ, ಮಹೇಶ್ ಚುನಾವಣಾ ಪ್ರಚಾರದ ವೇಳೆ ನಮ್ಮ ಪಕ್ಷದ ಅಭ್ಯರ್ಥಿಗೆ ಮತ ಹಾಕುವಂತೆ ಕೇಳಿಕೊಂಡೆ. ಅವನು ಆನಂದದಿಂದ ನಮ್ಮ ಲೇಔಟ್ ನವರನ್ನೆಲ್ಲಾ ಸೇರಿಸುತ್ತೇನೆ. ನಾನೆ ಆ ಲೇಔಟ್ ನ ಸಂಘದ ಅಧ್ಯಕ್ಷ, ಒಮ್ಮೆ ಅಭ್ಯರ್ಥಿಯನ್ನು ಕರೆದುಕೊಂಡು ಬನ್ನಿ ಎಂದರು. ನಾನು ಸರಿ ಎಂದು ನನ್ನ ಇನ್ನೂ ಕೆಲವು ಗೆಳೆಯರಿಗೆ ಹೇಳಿ ಆ ಲೇಔಟ್ ಗೆ ಪ್ರಚಾರಕ್ಕೆ ಹೋದೆ. ಅಲ್ಲಿ ನನ್ನ ಇನ್ನೊಬ್ಬ ಪ್ರಾಣ ಸ್ನೇಹಿತ ಕೂಡ ಆ ಸಭೆಗೆ ಬಂದಿದ್ದ. ಅವನನ್ನು ನಮ್ಮ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡಪ್ಪ ಎಂದು ವಿನಂತಿಸಿದೆ. ಅದಕ್ಕೆ ಅವನು ಸಮ್ಮತಿಸಿದ, ಈ ನನ್ನ ಪ್ರಾಣ ಸ್ನೇಹಿತನಿಗೆ ಹಲವು ಉಪಕಾರಗಳನ್ನು ನಾನು ಮಾಡಿದ್ದೆ. ಅವನ ಮಗನಿಗೆ ಒಂದು ಪ್ರಮುಖ ಶಾಲೆಯಲ್ಲಿ ಸೀಟು, ಅವನ ಪುಸ್ತಕ ಪ್ರಕಟಣೆ ಮಾಡಿದ್ದೆ ಹಾಗೂ ನಾನು ಅವನಿಗೆ ಒಂದು ಸೈಟು ತೋರಿಸಿ ಖರೀದಿ ಮಾಡಲು ನೆರವಾಗಿದ್ದೆ. ಹೀಗೆ ಹತ್ತು ಹಲವು ಉಪಕಾರ ಮಾಡಿದ್ದೆ. ಹಾಗಾಗಿ ಅವನು ನನ್ನ ಪರ ಪ್ರಚಾರ ಮಾಡುತ್ತಾನೆ ಎಂದು ನಂಬಿದ್ದೆ ಕೂಡ.
ಕೆಲವು ದಿನಗಳು ಕಳೆದ ನಂತರ ನನ್ನ ಸ್ನೇಹಿತ ಮಹೇಶ ಸಿಕ್ಕಿದ್ದ. ನಾನು ಎಂದಿನಂತೆ ಪ್ರಚಾರ ಹೇಗೆ ನಡೆಯುತ್ತಿದೆ ಎಂದು ಕೇಳಿದೆ ಹಾಗೂ ನನ್ನ ಪ್ರಾಣಕ್ಕಿಂತ ಶಶಿಧರನೂ ನಿನಗೆ ಸಹಾಯ ಮಾಡುತ್ತಿರುವನೆ ಎಂದೆ? ಅದಕ್ಕೆ ಅವನು ಸಹಾಯ ಮಾಡುವುದು ಹಾಗಿರಲಿ, ನೀನು ಅಂದು ಸಭೆ ಮಾಡಿ ಹೊರಟ ನಂತರ ನಿನ್ನ ಎದುರಾಳಿ ಪಕ್ಷದ ಅಭ್ಯರ್ಥಿಯನ್ನು ಕರೆಸಿ ನಿನ್ನ ಅಭ್ಯರ್ಥಿ ವಿರುದ್ಧ ಪ್ರಚಾರ ನಡೆಸಿದ ಎಂದನು! ನನಗೆ ಕೇಳಿ ಆಶ್ಚರ್ಯವಾಯಿತು….. ಕಾಡುವ ಪ್ರಶ್ನೆಗಳು ಪ್ರಶ್ನೆ 1: ನನ್ನ ಸ್ನೇಹಿತ ನನ್ನ ಅಭ್ಯರ್ಥಿಯ ಪರ ಪ್ರಚಾರ ಮಾಡಬೇಕೆಂದೇನಿಲ್ಲ. ಆದರೆ ಸುಳ್ಳು ಹೇಳುವ ಅವಶ್ಯಕತೆ ಏನಿತ್ತು. ಉತ್ತರ : ಪ್ರಶ್ನೆ 2: ನನ್ನ ಹತ್ತಿರ ಆವೊಂದು ಸಹಾಯ ಪಡೆದ ಮೇಲೆ ಈ ರೀತಿ ನನ್ನ ಅಭ್ಯರ್ಥಿಯ ವಿರುದ್ಧ ಪ್ರಚಾರ ಮಾಡಿದ್ದು ಸರಿಯೆ? ಉತ್ತರ: ಪ್ರಶ್ನೆ 3: ಇನ್ನು ಮುಂದೆ ಅವನು ಮತ್ತೊಮ್ಮೆ ನನ್ನ ಸಹಾಯ ಕೇಳಿದರೆ ಮಾಡಬೇಕೇ ? ಉತ್ತರ: ಪ್ರಶ್ನೆ 4: ಈ ಘಟನೆಯಿಂದಾಗಿ ನಾನು ಅವನನ್ನು ದ್ವೇಷಿಸಬೇಕೇ ? ಉತ್ತರ: ರಮೇಶ ಎಂ.ಎಚ್. ನಿರಾತಂಕ ಕೆಲವೊಮ್ಮೆ ನಮ್ಮ ಅನಿಸಿಕೆ ಸರಿ ಎಂದು ನಾವು ಹೇಳಿದರೆ ಅದನ್ನು ಒಪ್ಪದ ನನ್ನ ಸ್ನೇಹಿತ ಅದು ಹೀಗೂ ಇರಬಹುದು, ಅದು ಹಾಗೂ ಇರಬಹುದು ಎಂದು ರಾತ್ರಿಯಿಂದ ಬೆಳಗ್ಗಿನ ಜಾವದ ತನಕ ಚರ್ಚೆ ನಡೆಸಿ, ನಂತರ ನಿನ್ನ ಅನಿಸಿಕೆ ನಿನಗೆ ಇರಲಿ, ನನ್ನ ಅನಿಸಿಕೆ ನನಗಿರಲಿ ಗೆಳೆಯ ಎಂದು ವಿಷಯಗಳ ಚರ್ಚೆ ನಿಲ್ಲಿಸಿಬಿಡುತ್ತೇವೆ. ಕೊನೆಗೆ ನನ್ನನ್ನು ಅವನು ಒಪ್ಪಲಿಲ್ಲ, ಅವನನ್ನು ನಾನು ಒಪ್ಪಲಿಲ್ಲ. ಇಬ್ಬರ ನಡುವೆ ಮತ್ತೆ ನೂರು ಪ್ರಶ್ನೆಗಳು ಎದ್ದು, ಆ ನೂರು ಪ್ರಶ್ನೆಗಳು ತಲೆಯಲ್ಲಿ ಕೊರೆಯುತ್ತವೆ. ನನ್ನ ಸ್ನೇಹಿತ ನನ್ನ ವಾದವನ್ನು ಒಪ್ಪಿಕೊಳ್ಳದಿದ್ದರಿಂದ ಅವನ ಬಗೆಗೆ ಅಸಮಾಧಾನ ಹೆಚ್ಚಾಗತೊಡಗುತ್ತವೆ. ಮತ್ತೆ ನನ್ನ ಸ್ನೇಹಿತನಿಗೂ ಅದೇ ರೀತಿಯ ಅನುಭವ ಆಗಿದೆ. ಇದಕ್ಕೆ ಪರಿಹಾರವೆಂಬಂತೆ ಇತ್ತೀಚಿಗೆ ನಾನು ಅಂತಿಮವಾಗಿ ನನ್ನ ಸ್ನೇಹಿತನನ್ನು ಒಪ್ಪಿಸಲು ಜೋತು ಬೀಳುವುದು. ನಿನ್ನ ಅನಿಸಿಕೆ, ನನ್ನ ಅನಿಸಿಕೆ ಎರಡೂ ತಪ್ಪಿರಬಹುದು, ಆದರೆ ಬುದ್ಧನು ಕಂಡುಕೊಂಡ ಸತ್ಯದ ಬೆಳಕಿನಲ್ಲಿ ನಮ್ಮ ವಾದವನ್ನು ಮಾಡೋಣ ಎನ್ನುತ್ತ ಬುದ್ಧ ಈ ರೀತಿ ಹೇಳಿರುತ್ತಾನೆ ಎಂದು ಬುದ್ಧನ ಎರಡು ವಾಕ್ಯ Quote ಮಾಡಿ ಹೇಳಿದರೆ ತಕ್ಷಣ ನನ್ನ ಸ್ನೇಹಿತ ಇರಬಹುದು ಎಂದು ಒಪ್ಪಿ ವಾದಗಳಿಗೆ ತೆರೆ ಎಳೆದುಬಿಡುತ್ತಾನೆ. ಹಲವು ಸಂದರ್ಭಗಳಲ್ಲಿ ಸಮಸ್ಯೆಗಳ ಪರಿಹಾರಕ್ಕೆ ಬುದ್ಧನ ದಾರಿ ಹೊರತು ಅನ್ಯಮಾರ್ಗವಿಲ್ಲ ಎನಿಸಿಬಿಡುತ್ತದೆ.
ರಮೇಶ ಎಂ.ಎಚ್. ನಿರಾತಂಕ ಅದೊಮ್ಮೆ ಅಂತರ್ಜಾಲ ತಾಣದಲ್ಲಿ ಓದಿದ ನೆನಪು. ಒಬ್ಬ ಗೃಹಿಣಿ ಒಂದು ಸುಂದರವಾದ ಹೂವಿನ ಗಿಡವನ್ನು ಮನೆಗೆ ತರುತ್ತಾರೆ. ಸುಮಾರು 2 ವರ್ಷಗಳ ಕಾಲ ನೀರನ್ನು ಹಾಕುತ್ತಾ ಪೋಷಣೆ ಮಾಡುತ್ತಾರೆ. ಆದರೆ ಆ ಹೂವಿನ ಗಿಡದಲ್ಲಿ ಯಾವುದೇ ಬೆಳವಣಿಗೆ ಕಂಡುಬರುವುದಿಲ್ಲ. ಅವರು ಆ ಹೂವಿನ ಗಿಡದಲ್ಲಿ ಯಾವುದೇ ಬದಲಾವಣೆ ಕಂಡುಬಾರದಿದ್ದಾಗ ಅನುಮಾನ ಬಂದು ಗಿಡವನ್ನು ಕುಂಡದಿಂದ ಬೇರ್ಪಡಿಸಿ ನೋಡುತ್ತಾರೆ. ಆಗ ಅವರಿಗೆ ತಿಳಿದದ್ದು ಅವರು ಮನೆಗೆ ತಂದು ಬೆಳೆಸಿದ್ದು ಪ್ಲಾಸ್ಟಿಕ್ ನಿಂದ ಮಾಡಿದ ನೈಜ ಹೂ ಗಿಡದಂತೆ ಭಾಸವಾಗುವ ಪ್ಲಾಸ್ಟಿಕ್ ಹೂವಿನ ಗಿಡ. ಆದರೆ ನೈಜ ಹೂವಿನ ಗಿಡದಂತೆ ಕಾಣಿಸುತ್ತಿರುತ್ತದೆ. ನೈಜ ಗಿಡದ ಪಕ್ಕ ಅದನ್ನು ಇಟ್ಟು ಹೋಲಿಸಿ ನೋಡಿದರೆ ಅದು ಪ್ಲಾಸ್ಟಿಕ್ ಗಿಡ ಎಂಬಂತೆ ಯಾವುದೇ ಅನುಮಾನ ಬಾರದಿರುವುದು ಅಚ್ಚರಿ ಮೂಡಿಸುತ್ತದೆ.
ಹಾಗೆಯೇ ಸಂಬಂಧಗಳಲ್ಲಿಯೂ ನಮಗೆ ಪ್ಲಾಸ್ಟಿಕ್ ಗಿಡದಂತಹ ಸಂಬಂಧಗಳಿರುತ್ತವೆ. ನಾವು ಅಗಾಧವಾಗಿ ನಮ್ಮ ಸಂಬಂಧಗಳನ್ನು ಅತ್ಯಂತ ಪ್ರಾಮಾಣಿಕತೆಯಿಂದ ಕೂಡಿವೆ ಎಂದುಕೊಳ್ಳುತ್ತೇವೆ. ಆದರೆ ಕೆಲವು ಅಗ್ನಿ ಪರೀಕ್ಷೆಗಳು ಒದಗಿಬಂದಾಗ ನಮ್ಮ ಸಂಬಂಧಗಳು ಪ್ಲಾಸ್ಟಿಕ್ ಗಿಡದಂತೆ ನೈಜವಾದ ಸಂಬಂಧಗಳಲ್ಲ ಎಂದು ಅನಿಸಿಬಿಡುತ್ತದೆ. ಮನುಷ್ಯ ಬಟ್ಟೆ ತೊಡುವಷ್ಟು ಸುಲಭವಾಗಿ ಮುಖವಾಡವನ್ನು ತೊಡಬಲ್ಲ. ನೈಜವಾಗಿ ಪ್ರೀತಿಸುತ್ತಿದ್ದೇನೆ ಎಂಬಂತೆ ನಟಿಸಿ ನಂಬಿಸಬಲ್ಲ. ನಂಬಿಸಿ ನಡುನೀರಿನಲ್ಲಿ ಕೈಕೊಡಲೂ ಬಲ್ಲ. ಒಳಗೆ ಅಳುತ್ತಾ ನಗುಮುಖದಿಂದ ಮಾತನಾಡಲೂ ಬಲ್ಲ. ಒಳಗೆ ಕತ್ತಿ ಮಸೆದು ತನ್ನ ಕಾರ್ಯವನ್ನು ಸಾಧಿಸಿಕೊಂಡು ದ್ವೇಷವನ್ನು ಸಾಧಿಸಲೂ ಬಲ್ಲ. ಇತ್ತೀಚಿನ ಆಧುನಿಕ ಜಗತ್ತಿನಲ್ಲಿ ನಮ್ಮ ಸಂಪರ್ಕದಲ್ಲಿರುವ ಬಹುಪಾಲು ಜನರು ಇದೇ ರೀತಿ ಮುಖವಾಡ ಹೊತ್ತು ನಟಿಸುತ್ತಿರುತ್ತಾರೆ. ನಟಿಸಲೇ ಬೇಕಾದ ಅನಿವಾರ್ಯತೆ ಒದಗಿಬಂದು ಬಿಡುತ್ತದೆ. ಇನ್ನು ಬಹುಪಾಲು ಜನ ನಾವು ನಟಿಸದೆ ಇರದ ದಿನಗಳೇ ಇಲ್ಲ ಎಂದರೆ ತಪ್ಪಾಗಲಾರದು. ಆದರೆ ಕೆಲವೇ ಕೆಲವರು ನೈಜವಾಗಿ ಬದುಕನ್ನು ಸಾಗಿಸುತ್ತಿರುವವರೂ ನಮ್ಮ ಜೊತೆಯಲ್ಲೇ ಇರುತ್ತಾರೆ. ಅವರನ್ನು ಗುರುತಿಸಿ ಅವರೊಂದಿಗೆ ಸ್ನೇಹ, ವ್ಯವಹಾರ ಮಾಡಲು ನಾವುಗಳು ಕಲಿತುಕೊಳ್ಳಬೇಕಷ್ಟೆ. Honesty saves everyones time ಎಂಬಂತೆ ಬದುಕಲು ನಮಗೆ ಅತ್ಯಂತ ಕಷ್ಟಕರವಾದ ದಿನಗಳಲ್ಲಿ ನಾವು ಬದುಕುತ್ತೇವೆ. ಅಕಸ್ಮಾತ್ ಒಮ್ಮೆ ನಿಮ್ಮ ಸ್ನೇಹಿತರಿಗೆ ಹಣ ಕೊಡಿ. ಅವನು ಹಣವನ್ನು ತೆಗೆದುಕೊಂಡು ಮೋಸ ಮಾಡಿ ಓಡಿ ಹೋದರೆ ಜನ ಓಡಿ ಹೋದವನನ್ನು ಬಯ್ಯುವುದು ಕಡಿಮೆ. ಸ್ನೇಹವನ್ನು ನಂಬಿ ಹಣ ಕೊಟ್ಟ ನಿಮ್ಮನ್ನೇ ಬಯ್ಯುವುದು. ಇದು ಸಾಮಾನ್ಯ. ವ್ಯವಹಾರ ಮಾಡಲು ಗೊತ್ತಿರದ ಮೂರ್ಖನೆಂದು ಜನ ಹಣ ಕೊಟ್ಟವನನ್ನೇ ನಿಂದಿಸುತ್ತಾರೆ ಅಲ್ಲವೇ. ಸ್ನೇಹಕ್ಕೆ ನಂಬಿ ಹಣ ಕೊಟ್ಟೆಯಲ್ಲ ಶಹಭಾಷ್ ಎಂದು ಯಾರೂ ನಿಮ್ಮನ್ನು ಹೊಗಳುವುದಿಲ್ಲ. ಹಾಗಾಗಿ ಪ್ಲಾಸ್ಟಿಕ್ ಸಂಬಂಧಗಳ ಬಗ್ಗೆ ಎಚ್ಚರಿಕೆ ಸೂಕ್ತ ಎಂದು ಅನಿಸುತ್ತದೆ. ವಂದನೆಗಳೊಂದಿಗೆ ರಮೇಶ ಎಂ.ಎಚ್. www.socialworkfootprints.org ಅದೊಂದು ದಿನ ಬಸವನಗುಡಿ ನ್ಯಾಷನಲ್ ಕಾಲೇಜಿನ ಬಿ.ಎ. ತರಗತಿಯಲ್ಲಿ ಸಮಾಜಶಾಸ್ತ್ರ ಪಾಠ ಮಾಡುತ್ತಿದ್ದ ನಮ್ಮ ಗುರುಗಳು ಒಂದು ನೈಜ ಕಥೆಯನ್ನು ಹೇಳಿದ್ದರು. ಅವರ ಸ್ನೇಹಿತ ಶೇಖರ್ (ಅವರ ಹೆಸರು ಮರೆತಿದ್ದೇನೆ) ವೈಚಾರಿಕ ಪ್ರಜ್ಞೆಯಿಂದ ಕೂಡಿದ್ದರಂತೆ. ಅವರು ಯಾವುದೇ ಅವೈಜ್ಞಾನಿಕ ಪದ್ಧತಿಯನ್ನು ಆಚರಣೆ ಮಾಡುತ್ತಿರಲಿಲ್ಲವಂತೆ. ಯಾವುದೇ ಶ್ರಾದ್ಧ, ತಿಥಿಗಳಿಗೆ ಕುರಿತಂತೆ ಅವರಿಗೆ ಯಾವುದೇ ನಂಬಿಕೆ ಇರಲಿಲ್ಲವಂತೆ. ಅದನ್ನು ಆಚರಿಸುವವರನ್ನು ಕಂಡರೆ ಅವರಿಗೆ ವಿರೋಧಿಸುತ್ತಿದ್ದರಂತೆ.
ಕೆಲವು ವರ್ಷಗಳ ನಂತರ ಶೇಖರ್ ರವರ ತಂದೆ ಮರಣ ಹೊಂದಿದರು. ಆಗ ಶೇಖರ್ ತಂದೆಯ ಶ್ರಾದ್ಧ, ತಿಥಿ, ಪುಣ್ಯ ನೆರವೇರಿಸಬೇಕಾದ ಅನಿವಾರ್ಯತೆ ಒದಗಿಬಂತು. ಆಗ ಶೇಖರ್ ತಂದೆಯ ತಿಥಿಯ ನಂತರ ತಲೆಯ ಕೂದಲನ್ನು ತೆಗೆಸಿದರಂತೆ. ಇದು ಕಾಲೇಜಿನ ಇತರ ಸಹೋದ್ಯೋಗಿಗಳಿಗೆ ಇದುವರೆಗೂ ವೈಚಾರಿಕ ಪ್ರಜ್ಞೆ ಎಂದು ಬೋಧನೆ ನೀಡುತ್ತಿದ್ದ ಶೇಖರ್ ತಾವೇ ಅಂಧಾನುಕರಣೆ ಮಾಡುತ್ತಿದ್ದಾರೆ ಎಂದು ಗುಸುಗುಸು ಶುರುವಾಯಿತು. ಅವರ ಆತ್ಮೀಯ ಸ್ನೇಹಿತರು ಅಲ್ಲ ಶೇಖರ್, ನೀನು ಇಷ್ಟು ದಿವಸ ಅಂಧಾನುಕರಣೆ ಮಾಡಬಾರದು ಎಂದು ವಿರೋಧ ವ್ಯಕ್ತಪಡಿಸಿ ಅತ್ಯಂತ ವೈಚಾರಿಕನೆಂಬಂತೆ ಬಿಂಬಿಸಿಕೊಂಡು ಇಂದು ನೀನೇ ತಿಥಿ, ಶ್ರಾದ್ಧ ಮಾಡಿ ತಲೆ ಬೋಳಿಸಿಕೊಂಡು ಬಂದಿರುವೆ. ಈ ರೀತಿ ಹೇಳುವುದೊಂದು, ಮಾಡುವುದೊಂದು ನಿನ್ನ ಘನತೆಗೆ ತಕ್ಕುದಾದುದೆ ಎಂದು ಪ್ರಶ್ನಿಸಿದರಂತೆ. ಇದಕ್ಕೆ ಉತ್ತರಿಸಿದ ಶೇಖರ್ ಹೌದಪ್ಪ, ನಾನು ವೈಚಾರಿಕನಾಗಿಯೇ ಇದ್ದೇನೆ. ಆದರೆ ನಾನು ಸಂಪ್ರದಾಯ ಆಚರಿಸದೆ ಹಾಗೆಯೇ ನನ್ನ ಇಷ್ಟ ಬಂದ ಹಾಗೆ ಇದ್ದರೆ ನನ್ನ ವೃದ್ಧಾಪ್ಯದಲ್ಲಿರುವ ತಾಯಿ ಹಾಗೂ ನನ್ನ ಕುಟುಂಬದವರಿಗೆ ಬೇಸರ ತರಿಸಿದಂತಾಗುತ್ತದೆ. ನನ್ನ ವೈಚಾರಿಕತೆ ಏನಿದ್ದರೂ ನನ್ನ ವೈಯಕ್ತಿಕವಾದದ್ದು. ಇದನ್ನು ನನ್ನ ವೃದ್ಧ ತಾಯಿಗೆ ತಿಳಿಹೇಳಿ ಅರ್ಥ ಮಾಡಿಸಲು ಹೋಗಿ ಅವರು ಹಿಂಸೆ ಪಡುವುದನ್ನು ಹಾಗೂ ಸಂಕಟ ಪಡುವುದನ್ನು ನಾನು ನೋಡಲಾರೆ. ನನ್ನ ವೈಚಾರಿಕ ಪ್ರಜ್ಞೆ ಅವರಿಗೆ ನೋವು ನೀಡುವುದಾದರೆ ಮಾನಸಿಕವಾಗಿ ನಾನು ವೈಚಾರಿಕವಾಗಿದ್ದು ಲೌಕಿಕವಾಗಿ ವೈಚಾರಿಕತೆ ಬದಿಗಿಟ್ಟು ಅವರ ಸಂತಸಕ್ಕಾಗಿ ನಾನು ಮಾಡಬೇಕಾದ ಆಚರಣೆಗಳೆಲ್ಲವನ್ನೂ ಮಾಡಿ ಮುಗಿಸುತ್ತೇನೆ. ಅದು ತಪ್ಪೇ ಎಂದರಂತೆ. ಎಷ್ಟೋ ಸಂದರ್ಭಗಳಲ್ಲಿ ವ್ಯಕ್ತಿಗಳ ಹಲವು ಸಂಕೀರ್ಣ ಕಾಲಘಟ್ಟಗಳಲ್ಲಿ ಅವರಿಗೆ ಸರಿ ಎನಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅವರನ್ನು ಟೀಕಿಸಿ, ಅವರನ್ನು ಅನುಮಾನದಿಂದ ನೋಡುವ ಬದಲು ವ್ಯಕ್ತಿಯನ್ನು ಕೇಳಿ ಅವರು ಇರುವ ಸ್ಥಿತಿಯನ್ನು ಅರ್ಥೈಸಿಕೊಳ್ಳುವುದು ಒಳಿತಲ್ಲವೇ. ವಂದನೆಗಳೊಂದಿಗೆ ರಮೇಶ ಎಂ.ಎಚ್. www.socialworkfootprints.org ಒಂದು ಪುಸ್ತಕ ನಮ್ಮ ಚಿಂತನೆಯ ವಿಧಾನವನ್ನು ಬದಲಿಸಿಬಿಡಬಲ್ಲದು. ಅದೇ ಒಂದು ಪುಸ್ತಕವೇಕೆ, ಒಂದು ಪುಸ್ತಕದೊಳಗಿನ ವಾಕ್ಯದಿಂದಲೂ ನಮ್ಮ ಜೀವನ ಬದಲಾಯಿಸಿಕೊಂಡುಬಿಡಬಹುದು. ಆದರೆ ನಮಗೆ ಬದಲಾಯಿಸಿಕೊಳ್ಳುವ ತಾಕತ್ತು ಇರಬೇಕು ಅಷ್ಟೆ. ಒಂದು ದೀಪ ಸುತ್ತಲೂ 4 ಅಡಿ ಬೆಳಕು ನೀಡುತ್ತದೆ. ಅದೇ ದೀಪವನ್ನು ಹಿಡಿದು ಕತ್ತಲಲ್ಲಿ ನಡೆಯುತ್ತಾ ಸಾಗಿದರೆ ದಾರಿಯುದ್ದಕ್ಕೂ ಬೆಳಕು ನೀಡಬಲ್ಲದು. ನಾವು ತಲುಪಬೇಕಾಗಿರುವ ಜಾಗವನ್ನು ದೀಪದ ಬೆಳಕಿನಿಂದ ತಲುಪಿಬಿಡಬಹುದು. ಅಂತೆಯೇ ಒಂದು ಪುಸ್ತಕದಲ್ಲಿನ ವಿಚಾರಗಳು ಹಲವು ವಿಭಿನ್ನ ವಿಚಾರ, ಚಿಂತನೆ, ಪ್ರಶ್ನೆಗಳನ್ನು ನಮ್ಮ ತಲೆಯೊಳಗೆ ಬಿತ್ತುತ್ತವೆ ಎಂದರೆ ತಪ್ಪಾಗಲಾರದು. ಇದರಿಂದಾಗಿ ಮತ್ತೆ ಹಲವು ಪುಸ್ತಕಗಳನ್ನು ಓದಲೇಬೇಕಾದ ಅನಿವಾರ್ಯತೆ ಒದಗಿಬಂದು ಬಿಡುತ್ತದೆ.
ಡಾ. ಸಿ.ಆರ್. ಗೋಪಾಲ್ ನಿವೃತ್ತ ಸಹಾಯಕ ಪ್ರಧಾನ ವ್ಯವಸ್ಥಾಪಕರು, ಸ್ಮಯೋರ್ (SMIORE) ಇಂದು ಬೆಳಿಗ್ಗೆ ಡಾ. ಸಿ.ಆರ್. ಗೋಪಾಲ್ ರವರು ನನಗೊಂದು Whatsapp ಕಳುಹಿಸಿದ್ದರು. “Dear Ramesh, Can you do me a favour. You know me for the last 10 years. In my books, as a publisher you have written me few good things about me. You have never got a chance to analyze my personality. Now you can do it here. You can talk to me or you can put it on paper. You should be analysis my personality, my positives and negatives without any hesitation, so that I can correct myself. Feel free to do it, I will not misuse.” ಡಾ. ಸಿ.ಆರ್ ಗೋಪಾಲ್ ಹಾಗೂ ನನ್ನ ಪರಿಚಯವಾಗಿ ಸುಮಾರು 10 ವರ್ಷ ಕಳೆದಿವೆ. ಅವರಿಗೆ ಈಗ 67 ವರ್ಷಗಳು. ಅವರು MSW ಸ್ನಾತಕೋತ್ತರ ಪದವಿಯನ್ನು ಪಡೆದು, ಬೆಂಗಳೂರು ವಿಶ್ವವಿದ್ಯಾಲಯ ದಿಂದ Ph.D. ಅನ್ನು ಪಡೆದಿದ್ದಾರೆ. ದಿ ಸೊಂಡೂರು ಮ್ಯಾಂಗನೀಸ್ ಅಂಡ್ ಐರನ್ ಓರ್ಸ್ (ಲಿ) ರಲ್ಲಿ ಕೆಲಸ ನಿರ್ವಹಿಸಿ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಇದುವರೆಗೂ 10 ಪುಸ್ತಕಗಳನ್ನು ರಚಿಸಿದ್ದಾರೆ. ಅತ್ಯಂತ ಸೌಮ್ಯ, ಸರಳ, ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದವರು. ನನಗೂ ಡಾ. ಸಿ.ಆರ್. ಗೋಪಾಲ್ ರವರಿಗೂ ಎಚ್.ಎಂ. ಮರುಳಸಿದ್ಧಯ್ಯ ರವರ ಮನೆಯಲ್ಲಿ ಆಗಾಗ ಭೇಟಿ ಆಗುತ್ತಿತ್ತು ಹಾಗೂ ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ನಂತರದ ದಿನಗಳಲ್ಲಿ ನಮ್ಮ ಪತ್ರಿಕೆಯ ಸಂಪಾದಕ ಮಂಡಳಿಯಲ್ಲಿ ಇರಲು ಕೋರಿಕೊಂಡೆವು. ನಂತರ ಪತ್ರಿಕೆಯ ಸಂಪೂರ್ಣ ಜವಾಬ್ದಾರಿ ಹೊತ್ತು ಅದನ್ನು ಹೊರತರಲು ನಮ್ಮ ಸಂಸ್ಥೆ ಹಾಗೂ ತಂಡಕ್ಕೆ ಸಹಕಾರ ನೀಡುತ್ತಾ, ಸಹಕರಿಸಿದರು.
ಬದುಕಿನಲ್ಲಿ ಅನುಭವಗಳು ಪಾಠ ಕಲಿಸುತ್ತಾ ಸಾಗುತ್ತವೆ. ನಾವು ಪಾಠ ಕಲಿತಿದ್ದೇವೆ ಅನಿಸುತ್ತದೆ. ಆದರೆ ಮತ್ತೆ ಮತ್ತೆ ಎಡವಿ ಬೀಳುತ್ತಿರುತ್ತೇವೆ. ಸಾವಿನವರೆಗೂ ಪಾಠ ಕಲಿಯುತ್ತಿರಲೇಬೇಕು ಅನಿಸುತ್ತದೆ. ಕೆಲವೊಮ್ಮೆ ನಮ್ಮ ಜಾನಪದ ಕಥೆಗಳು, ಹಿರಿಯರ ಅನುಭವದ ಮಾತುಗಳು ನಾವು ಸರಿಯಾಗಿ ಅರ್ಥಮಾಡಿಕೊಂಡರೆ ಬದುಕಿನಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಹಕಾರಿಯಾಗುತ್ತದೆ. ನನ್ನ ಜೀವನದಲ್ಲಿ ನಾನು ಓದಿದ ಮೂರು ಕತೆಗಳು ಇಂದಿಗೂ ನನಗೆ ಕ್ಲಿಷ್ಟಕರ ಸಮಯದಲ್ಲಿ ಕೆಲವು ನಿರ್ಧಾರ ತೆಗೆದುಕೊಳ್ಳಲು ಸಹಕಾರಿಯಾಗಿವೆ.
ನಾನು ಈ ಕತೆ ಓದಿ ಬಹಳ ವರ್ಷಗಳು ಕಳೆದಿವೆ. ಹಾಗಾಗಿ ಎಲ್ಲಿ ಓದಿದೆ ಎಂಬ ನೆನಪಿಲ್ಲ, ಆದರೆ ಇಂದಿಗೂ ನನ್ನನ್ನು ಕಾಡುವ ಕಥೆಗಳಾಗಿವೆ. ರಾಮಕೃಷ್ಣ ಪರಮಹಂಸರು ಈ ಕಥೆ ಹೇಳಿದರು ಎಂದು ನೆನಪು. |